ಮಾತಾಮಹಿ

ಅಳಿದು ಮನದೊಳಗುಳಿದು ನೆನಪಿನಾಳದೊಳಿಳಿದು
ಹೃದಯ ಗಿರಿಯನು ದಿನವು ಸುಡುವುದೇಕೆ?/
ಭಾವ ಶಿಖರವು ಕರಗಿ ಕಣ್ಣೀರು ಕೋಡೈಸೆ
ರ್ಪಣವನರ್ಪಿಸಿದೆನೆನ್ನಬೇಕೆ! //

ಬದುಕು ಮುಳ್ಳಿನ ಹಾದಿ ಬಡತನವೆ ಒಡನಾಡಿ
ಪಟ್ಟಕಷ್ಟವ ದೇವನೊಬ್ಬ ಬಲ್ಲ/
ಭೀಮಲಿಂಗನ ನಂಬಿ ಬಾಳ್ಕೆಯನು ಕಟ್ಟಿದಿರಿ
ಬವಣೆಗಳು ನೂರಿರಲಿ ಚಿಂತೆಯಿಲ್ಲ//

ಬೇವುಬೆಲ್ಲದ ತೆರದಿ ನೋವು ನಲಿವನು ಬೆರೆಸಿ
ನೆಮ್ಮದಿಯ ಭೋಜನವ ಸಿದ್ಧವಿಟ್ಟು/
ಅಕ್ಕರೆಯ ತಟ್ಟೆಯಲಿ ಬಡಿಸೆ ನಮಗದನಿಟ್ಟು,
ನಿಮಗಲ್ಲಿ ಮಿಕ್ಕುವುದದೆಷ್ಟು ಹಿಟ್ಟು?//

'ವ್ಯಥೆಯೆಲ್ಲವೆನಗಿರಲಿ ಲೋಕಕ್ಕೆ ಸುಖವಿರಲಿ'
ಇದುವೆ ನಿಮ್ಮಯ ಬಾಳ ಧ್ಯೇಯಮಂತ್ರ/
ಮನೆಯವರೊ ಬಂಧುಗಳೊ ಪಶುಪಕ್ಷಿ ಜೀವಿಗಳೊ
ಯಾರನ್ನು ನೋಯಿಸದುದಾರ ಸೂತ್ರ//

ಪತಿಯ ಹಿತವನು ಕೇಳಿ ನಮಗೆ ನೀತಿಯ ಪೇಳಿ
ತಪ್ಪದೆಯೆ ಹದಿಬದೆಯ ಕೆಲಸವನ್ನು/
ಅಮಿತ ಸಹನೆಯ ತಾಳಿ ಧರ್ಮಮಾರ್ಗದಿ ಬಾಳಿ ಸಾರ್ಥಕವಗೊಳಿಸಿದಿರಿ ಜನುಮವನ್ನು//

ಇಹದ ಜೀವನ ಬೆಳಗಿ ಚಿರ ಬೆಳಕ ಸೇರಿದಿರಿ
ಬಂಧಗಳ ಕಡಿಯಲೀ ತವಕವೇಕೆ?/
ಭೌತ ದೇಹವ ಕಳೆದು ಭಾವವೊಂದೇ ಉಳಿದು
ಹೃದಯ ಗಿರಿಯನು ದಿನವು ಸುಡುವುದೇಕೆ?//


    ೩೧/೦೮/೨೦೨೩

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಉಮಾಶಂಕರ ಕಲ್ಯಾಣ