ಛಂದದ ಹರಟೆ
ಉಮಾಶಂಕರರು 'ವಿಹಾ' ಎಂಬ ಚಂದದ ಪದ್ಯವನ್ನು ಪ್ರಾಚೀನ ಕಾಲದಲ್ಲಿ ಬರೆದಿದ್ದು, ದುರದೃಷ್ಟವಶಾತ್ ಅದೀಗ ಲಭ್ಯವಿಲ್ಲ. ಆದರೆ ಈ ಕೆಳಗಿನ ಹರಟೆಯಿಂದ ನೀವು ಅದರ ಸಾರಾಂಶವನ್ನು ಗ್ರಹಿಸಬಹುದು.
'ವಿಹಾ' ಪದ್ಯಕ್ಕೆ ಸುಮುಖರ ಪ್ರತಿಕ್ರಿಯೆ-
ಕಾಳಿದಾಸ ಮೋಡ ನೋಡಿ
ದೂತ ಪದ್ಯ ಬರೆದರೆ,
ಮಗುವನೊಂದ ನೋಡಿ ನೀವು
ಪದ್ಯ ಬರೆದಿರಲ್ಲವೆ!
ಶಬ್ದ-ರಸದ ಬರವು ಬಂದು
ನಾನು ಸುಮ್ಮನಾಗಿಹೆ,
ಶಾರದೆಯನು ಒಲಿಸಿಕೊಂಡ
ಗುಟ್ಟು ತಿಳಿಸಬಾರದೆ?
ಅಂದ ಹಾಗೆ ವಿಹಳ ಬಗೆಗೆ
ನಮಗು ಸ್ವಲ್ಪ ಹೇಳಿರಿ|
ಆರು ಆಕೆ ಊರು ಎತ್ತ
ಎಂಬುದನ್ನು ತಿಳುಹಿರಿ||
ನನಗೆ ಆಕೆಯನ್ನು ಒಮ್ಮೆ
ನೋಡಿದಂತೆ ಅನಿಸಿತು|
'ನಿಮ್ಮ ಸೊಸೆಯೆ?' ಎಂಬ ಪ್ರಶ್ನೆ
ಮನಸಿನಲ್ಲಿ ಮೂಡಿತು||
ಉಮಾಶಂಕರ್-
ಕಾಳಿದಾಸನೆದುರು ನಾನು
ಕಲಭದೆದುರಿನಿರುವೆಯು|
ಮನಸಿಗೇನು ಬಂತೊ ಅದನೆ
ಬರೆವುದೊಂದೆ ಕೆಲಸವು||
ಛಂದವಿಲ್ಲ ಪ್ರಾಸವಿಲ್ಲ!
ಲಯವ ಕೊಂಚ ನಂಬಿಹೆ|
ರಸಧ್ವನಿಗಳುಸಿರೆ ಇಲ್ಲ
ಪದ್ಯಬರೆದೆನೆಂದಿಹೆ||
ಶಾರದೆಯನ್ನೊಲಿಸಿಕೊಂಡ
ಗುಟ್ಟು ಬೇಕು ಎಂದಿರಿ|
ಅಯ್ಯೊ ಆಕೆ ಎನಗೆ ಒಲಿದ
ಳೆಂದು ಪೇಳ್ದರಾರು ರೀ?||
ಆಕೆಗೀಗ ಮಲೆಯನಾಡಿ
ನಲ್ಲೆಯಂತೆ ವಾಸವು|
ನೀರುಗಾರಿನೂರ ಸುಮುಖ-
ರಲ್ಲೆಯಂತೆ ಪೂಜೆಯು||
ಎನಗೆ ಒಲಿದ ದೇವಿ ಲಕುಮಿ,
ಎಂತದೆಂದು ಕೇಳ್ದಿರಾ|
ಸುಮುಖ ಸಖ್ಯವನ್ನು ತಗುವ
ಶ್ರೀಯ ಪೇಳಬಲ್ಲಿರಾ?||
----
ಜ್ಞಾನಸುಧಾ ಪದವಿ ಪೂರ್ವ
ವಿದ್ಯಾಲಯ ಬಲ್ಲಿರಿ|
ನಾನು ಹರುಷದಿಂದ ವರುಷ
ವೊಂದ ಕಳೆದುದಲ್ಲೆ ರೀ!||
ಅಲ್ಲಿ ಎನಗೆ ಅಕ್ಕನಂಥ
ಗೆಳತಿಯೋರ್ವರಿರ್ಪರು|
ಲತಾ ನಾಮಧೇಯದಲ್ಲಿ
ಖುಷಿಯ ಹಂಚುತಿರುವರು||
ವಿಹಳು ಅವರ ಮುದ್ದುಮಗಳು
ಎನಗೆ ಸೊಸೆಯ ಸಮವಿಹಳ್|
ಆಟಪಾಠದಿಂದ ಎನ್ನ
ಮನಕೆ ಮೋಡಿ ಮಾಡಿಹಳ್||
ನಾನು ಬರೆದ ಪದ್ಯವೆಂಬ
ಕಂತೆಬರಹದಲ್ಲಿಯೂ|
ಕೊಂಚ ರಸವು ಕಂಡರದಕೆ
ವಿಹಳ ಸ್ಫೂರ್ತಿ ಮೂಲವು||
ಸುಮುಖ-
ತಿಂಗಳೀಗ ಎಪ್ಪ'ರೀಲು'
ಎಂಬ ವಿಷಯ ತಿಳಿದಿದೆ|
ಹಾಗೆ ಎಂದು ಇಷ್ಟು ಉದ್ದ
ರೀಲು ಸುತ್ತಿ ಬಿಡುವುದೆ?||
ಗಳಿತ ಹಣ್ಣಿನಲ್ಲಿ ರಸವು
ಇಲ್ಲವೆಂಬುದೆಲ್ಲಿದೆ?|
ಅಂತೆ ನಿಮ್ಮ ಪದ್ಯದಲ್ಲಿ
ರಸವು ತುಂಬಿ ತುಳುಕಿದೆ||
ಛಂದವಿಲ್ಲದಿದ್ದರೂನು
ಪದ್ಯ ಚಂದವಾಗಿದೆ|
ನಿಮ್ಮ ಗತಿಯ ನಾನು ಹಿಡಿದು
ನಾಲ್ಕು ಸಾಲು ಬರೆದಿಹೆ||
ನಿಮಗೆ ತಾಯಿ ಬರಹದೊಡತಿ
ಒಲಿದಳೆಂಬ ಸತ್ಯವ|
ಯಾರು ಯಾಕೆ ಹೇಳಬೇಕು
ಕಾಂಬುದೆನಗೆ ನಿತ್ಯವು||
ಆಕೆ ಮಲೆಯನಾಡಿನಲ್ಲಿ
ವಾಸವಿರುವಳೆಂದಿರಾ?|
ನಿಜವೆ, ಶೃಂಗಗಿರಿಯ ಕೆಳಗೆ
ತಾಯಿ ನೆಲೆಸಿ ಪೊರೆವಳು||
ನಮ್ಮ ವಿಷಯ ಬಿಡಿ ಸ್ವಾಮಿ,
ಕಾಲಿ ಕೊಡದ ಶಬ್ದವು|
ತಮ್ಮ ಸಂಗ ಮಾಡಿ ಕಲಿತ
ಅಲ್ಪಸ್ವಲ್ಪ ವಿದ್ಯೆಯು||
--
ಅಹುದೆ, ನಿಮ್ಮ ಸ್ವಂತ ಸೊಸೆಯು
ಈಕೆ ಎಂದು ಗ್ರಹಿಸಿದೆ|
ಗ್ರಹಿಕೆ ದೋಷ ಆಯಿತಿರಲಿ
ನನಗೆ ಮರೆವು ಕಾಡಿದೆ||
ತಿರುಗಿ ನೋಡೆ ಬಂಧು-ಬಂಧ
ವೆಲ್ಲ ಒಂದು ವಿಸ್ಮಯ|
ಅಪರಿಚಿತರು ಆಪ್ತರೆನಿಪ
ಜಗವೆ ಬಹಳ ಸೋಜಿಗ||
ಹಲವು ಬಾರಿ ಮಿತ್ರರಲ್ಲಿ
ಬಂಧುಗಳನು ಕಾಣ್ವೆವು|
ಕೆಲವು ಬಾರಿ ಬಂಧುಗಳಲು
ವೈರದೊಡನೆ ಬಾಳ್ವೆವು||
ಒಮ್ಮೆ ನಿಮ್ಮ ಮನೆಗೆ ಬಂದು
ಉಂಡೆನಲ್ಲ ಭೋಜನ|
ಅಂದು ಕಂಡು ಹೋದೆನಲ್ಲ
ನಿಮ್ಮ ಅಕ್ಕ-ಬಾವನ||
ನಿಮ್ಮ ಅಕ್ಕನಡುಗೆಯೂಟ
ಮನಕೆ ತುಂಬ ತೃಪ್ತಿಯು|
ಎನ್ನ ಸ್ವಂತ ಅಕ್ಕನೆಂಬ
ತೆರದಿ ಬಂತು ಪ್ರೀತಿಯು||
''ಸುಮುಖ ನಿನ್ನ ಕೇಳುತಿರುವ''
ಎಂದು ಅವರಿಗರುಹಿರಿ|
ಅವರ ಮಗನ ಹೆಸರು ಮರೆತೆ,
ಮೆಲ್ಲನೆನಗೆ ಹೇಳಿರಿ||
ಉಮಾಶಂಕರ್-
ನಿಮ್ಮ ಬರಹವನ್ನೆ ಇಂದು
ಅಗ್ರಜಳಿಗೆ ಕಳಿಸಿಹೆ|
ಧನ್ಯವಾದ, ಸೂಪರ್ಬು
ಎಂಬುತ್ತರ ಗಳಿಸಿಹೆ||
ಇನ್ನೊಮ್ಮೆಯು ಬರಲೆಬೇಕು
ನೀವು ಅಲ್ಲಿನೂಟಕೆ|
ಎಂದು ಬರೆದು ಕಳುಹಿಸಿಹಳು
ಇಂದು ಭಾವನೊಟ್ಟಿಗೆ||
ಊಟ ಮಾಡೆ ಬನ್ನಿ ನೀವು
ಎಂಬುದೆನ್ನ ಬಿನ್ನಹ|
ಖಾಲಿಹೊಟ್ಟೆಯಲ್ಲೆ ಬನ್ನಿ
ಯೆಂಬುದೊಂದೆ ಆಗ್ರಹ(😜)||
ಎನ್ನ ಮುದ್ದು ಅಳಿಯನೀಗ
ಪುಟ್ಟ ಹನುಮರಾಯನು|
ಧೀಮಂತನೆಂಬ ಪೆಸರ
ಪೊತ್ತು ತಿರುಗುತಿರುವನು||
ಅವನ ತುಂಟುತನದ ಲೂಟಿ
ನಿಮ್ಮ ಊಹೆಗೆಟುಕದು|
ಮನೆಯ ಮಾಡು ನೆಲಕೆ
ಬರುವುದೊಂದೆ ಬಾಕಿ ಇರುವುದು!||
ಸುಮುಖ-
ಶೇಷಶಯನದಲ್ಲಿ ಅಂದು
ಕಂಟಭರ್ತಿ ತಿಂದೆವು|
ಎಂಬ ಗುಟ್ಟ ಅಲ್ಲಿ ತಿಳಿಸಿ
ರಟ್ಟು ಮಾಡಿ ಬಿಟ್ಟಿರೇ? 😅
--------
ಕೊಪ್ಪಲತೋಟದ ಗಣೇಶ ಭಟ್ಟರು
ನವ ಅವಧಾನವ ಗೈದಿಹರು|
ಕೊಂಡಿಯು ಸಿಗಲು ಕಳುಹುವೆ ನಿಮಗೆ
ನೋಡಿರಿ ತಪ್ಪದೆ ಬಿಡುವಿರಲು||
ಉಮಾಶಂಕರ್-
ಆ ಅವಧಾನವ ಅಂದೇ ನೋಡಿದೆ
ಪಡದಿರಿ ಕಷ್ಟವ ಹುಡುಕುತಲಿ|
ಅದ್ಭುತವಾಗಿಹ ರಸಕವಿತೆಗಳ
ಕಟ್ಟಿಹರ್ಭಟ್ಟರು ಸರಸದಲಿ||
ಸುಮುಖ-
ಆದರೆ ಕೊಂಡಿಯ ಕಳಿಸಿರಿ ಈಗಲೆ
ನೋಡುವೆ ರಾತ್ರಿಯ ಹೊತ್ತಿನಲಿ|
ಎಲ್ಲೆಡೆ ಹುಡುಕಿದೆ ಕೊಂಡಿಯು ಸಿಗದದು
ಮನವದು ಅಳುತಿದೆ ಪೆಚ್ಚಿನಲಿ||
ಉಮಾಶಂಕರ್-
ಸಬ್ಸ್ಕ್ರೈಬಾಗಿರಿ ಗೀಪಾ ಹೆಸರಿನ
ಚಾನಲ್ಗದು ಊ ನಳಿಕೆಯಲಿ|
ಮತ್ತದೊ ಪಡೆಯಿರಿ ಹೊಸ ಹೊಸ
ರಸವತ್ ಕಾಲಕ್ಷೇಪವ ದಿನದಲ್ಲಿ||
ಸುಮುಖ-
ಗೀಪಾದಲ್ಲಿಯು ನೋಡಿದೆ ನಿನ್ನೆಯೆ
ಸಿಗಬಹುದೆನ್ನುವ ಆಸೆಯಲಿ|
ಪ್ರವಚನ ರಾಶಿಯೆ ಕಂಡಿತು, ಆದರೆ
ಕಾಣದೆ ಹೋಯಿತು ಅವಧಾನ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ