ಮರಳಿ ಮಣ್ಣಿಗೆ
ರೈಲು ಬಂಡಿಯು ಚುಕುಬುಕೆನ್ನುತ
ಲೂರ ದಾರಿಯ ಹಿಡಿಯಿತು\
ಐಲು ಮನಸಿದು ತನ್ನ ನೆನಪಿನ
ಬುತ್ತಿ ಬಿಚ್ಚಿಡತೊಡಗಿತು\\
ಲೂರ ದಾರಿಯ ಹಿಡಿಯಿತು\
ಐಲು ಮನಸಿದು ತನ್ನ ನೆನಪಿನ
ಬುತ್ತಿ ಬಿಚ್ಚಿಡತೊಡಗಿತು\\
ಮರದ ಮರೆಯಲಿ ತೊರೆಯ ಬದಿಯಲಿ
ನೋಡಿರಲ್ಲಿದೆ ನಮ್ಮನೆ\
ಹಾರಿ ಹೋಗಿದೆ ಮನವದಲ್ಲಿಗೆ
ದೇಹವಿಲ್ಲಿದೆ ಸುಮ್ಮನೆ\\
ಹುಟ್ಟಿ ಬೆಳೆದಿಹ ಕಥೆಯ ಹೇಳುವ
ಗೋಪಿ ಹಕ್ಕಿಯ ಹಾಡಿದೆ\
ತೊಟ್ಟಿಲಾಡಿದ ಮೊದಲು ತೊದಲಿದ
ನೆನಪದೆಲ್ಲವು ಅಲ್ಲಿದೆ\\
ಕಳೆದು ಹೋದವು ಬಹಳ ದಿನಗಳು
ಮನೆಯ ದಾರಿಯ ಕಾಣದೆ\
ಹಳೆಯ ನೆನಪದು ಮನವ ಕಲಕಲು
ಕರಗಿ ಕಂಬನಿಯಿಳಿದಿದೆ\\
ಹಲವು ನಾಡನು ಸುತ್ತಿ ಸಾಗಿದೆ
ಸುಖವದೆಲ್ಲಿದೆ ತಿಳಿಯದೆ\
ಒಲುಮೆ ತುಂಬಿದ ತವರು ಮಣ್ಣಿಗೆ
ಮರಳಲಲ್ಲಿಯೆ ಸೊಗವಿದೆ\\
ಬೆಳಕು ಮೂಡಿದೆ ರಾತ್ರಿ ಮುಗಿದಿದೆ
ಕವಿದ ಕತ್ತಲೆ ಕಳೆದಿದೆ\
ಇಳೆಗೆ ಬಿದ್ದಿಹ ತಿಳಿಯ ಬೆಳಕಲಿ
ಮನೆಯ ಹಾದಿಯು ಕಂಡಿದೆ\\
೨೬/೦೭/೨೦೧೯

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ