ಅಭಿಜಾತ vs ಅಣಕು

ಉಮಾಶಂಕರ:
ಕಾಡನಡುವಲೊಂದು ಪುಟ್ಟ
ಹೆಂಚು ಮನೆಯ ಮಾಡಿಕೊಂಡು
ಧಾರೆಯಾಗಿ ಬೀಳ್ವ ಮಳೆಯ
ನೋಳ್ಪ ಕನಸಿದೆ|
ಓಡಿ ಬರುವ ತರಗೆಲೆಗಳ
ಮೇಲೆ ಕುಳಿತು ಬರುವ ಗಾಳಿ
ಭೋರುಭೋರನೆನಲು ಬೆಚ್ಚಿ
ಬೀಳಬೇಕಿದೆ|
ಹೊರಗೆ ಗುಡುಗು ಸಿಡಿಲು ಜಗಳ
ವಾಡುತಿರಲು ಮನೆಯ ಮಡಿಲ
ಮಸುಕು ಮೂಲೆಯಲ್ಲಿ ಕಳೆದು
ಹೋಗಬೇಕಿದೆ|
ಜಗದ ರೂಕ್ಷ ಗದ್ದಲಗಳ
ಮರೆತು ಮತ್ತೆ ಮನವ ತಣಿಪ
ಬೆಳಗು ಬೈಗು ವಿಧುವ ಸುಧೆಯ
ಸವಿಯಬೇಕಿದೆ|
ಪಂಚಭೂತವೆಲ್ಲವುಗಳ
ಶಕ್ತಿಯೆದುರು ನನ್ನತನವು
ಇಲ್ಲವಾಗಿ ಅವುಗಳನ್ನು
ಸೇರಬೇಕಿದೆ|



ಸುಮುಖ:
ಮನೆಯ ಹೆಂಚು ಸೋರುತಿರಲು
ಹಾಳೆ ಸೋಗೆಗಳನು ಕಟ್ಟಿ
ಒಳಗೆ ನೀರು ಸುರಿಯದಂತೆ 
ತಡೆಯಬೇಕಿದೆ|
ಭೋರು ಗಾಳಿಗಲ್ಲಿ ಸಿಕ್ಕಿ
ಟಪ್ಪೆನುತ್ತ ಅಡಿಕೆ-ಬಾಳೆ
ಮುರಿದು ಬೀಳೆ ಅಯ್ಯೊ-ಶಿವನೆ
ಎನ್ನಬೇಕಿದೆ|
ಹೊರಗೆ ಕೆಸರ ಕಾಲು ತೊಳೆದ
ಬಳಿಕ ಸಿಗುವ ಜಿಗಣೆಗಳನು
ಬಚ್ಚಲೊಲೆಯ ಮೂಲೆಗೆಸದು
ಕೊಲ್ಲಬೇಕಿದೆ|
ಬೆಟ್ಟದಿಂದ ನೀರು ಹರಿದು 
ಅಂಗಳಕ್ಕೆ ನುಗ್ಗಿ ಬರಲು
ಅಡ್ಡಕಟ್ಟೆಯನ್ನು ಕಟ್ಟಿ 
ಬದುಕಬೇಕಿದೆ|
ಪಂಚಭೂತವೆಲ್ಲವುಗಳ
ಶಕ್ತಿಯೆದುರು ವಿದ್ಯುಚ್ಛಕ್ತಿ
ಇಲ್ಲವಾಗೆ ಚಿಮಣಿಯನ್ನು
ಹಚ್ಚಬೇಕಿದೆ|

೧೩/೦೬/೨೦೨೪


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ