ಕುಸುಮ ಷಟ್ಪದಿಯಲ್ಲಿ ಪ್ರೇಮಪದ್ಯ

ಎನ್ನ ಮನಸಿಗೆ ನೀನು
ಕನ್ನ ಹಾಕಿದೆಯಲ್ಲೆ
ಕನ್ನೆ ನೀನೆಲ್ಲಿರುವೆ ಬಾರೆ ಪ್ರಿಯೇ|
ಕನ್ನಡದಿ ಪದ್ಯವನು
ನಿನ್ನ ನೆನಪಲಿ ಬರೆದೆ
ನಿನ್ನು ಕಾಯಿಸಬೇಡ ನೋಡೀಗಲೇ||೧||

ಬೇಡವೆಂದರು ನಾನು
ಮೋಡಿ ಮಾಡಿದೆ ನೀನು
ಜೋಡಿಯಾಗುವ ಬಯಕೆ ತಂದೆಯಲ್ಲೆ|
ಓಡಿ ಹೋಗುವೆಯೀಗ
ಕಾದು ಕುಳಿತಿರೆ ನಾನು
ಕಾಡಹತ್ತಿಹೆ ಬಿಡದೆ ನಿದ್ರೆಯಲ್ಲು||೨||

ನೆನಪು ಕಾಡುತಲಿಹುದು
ದಿನಗಳುರುಳುತಲಿಹುದು
ಮನವು ಮರ್ಕಟನಂತೆ ಕುಣಿಯುತಿಹುದು|
ಕನಸು ಕಾಂಬುದು ಸಾಕು
ನನಸುಗೊಳಿಸುವ ಬಾರೆ
ನಿನಗೆ ನನ್ನಯ ಕಷ್ಟ ತಿಳಿಯದೇನು||೩||

ಹೆದರದಿರು ನೀನೀಗ
ಹದಿಹರೆಯ ಕಳೆದಿಹುದು
ಹೃದಯ ಕರೆದಿದೆಯಿನ್ನು ತಡೆಯಲೇಕೆ?|
ವಿಧಿ ಬರೆದ ಜೋಡಿಯಿದು
ಮದುವೆಯಾಗಲೆಬೇಕು
ಮುದಿಯ ವಯಸಿನ ತನಕ ಕಾಯಬೇಕೆ?||೪||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ