ಬಾಳ ಸಂಜೆ

ಬಾಲ ಬೆಳಗದು ಕಳೆದು ಯೌವನದ ಬಿಸಿ ಮುಗಿದು
ಮುಸ್ಸಂಜೆಯಿಳಿ ಬೆಳಕು ಬೀಳುತ್ತಿತ್ತು|
ಕಾಲಚಕ್ರವು ತಿರುಗೆ ತಾನದನು ಆಧರಿಸಿ
ಬಾಳಬಂಡಿಯು ಮುಂದೆ ಸಾಗುತ್ತಿತ್ತು||

ದಿನದ ಘಟನೆಗಳೆಲ್ಲ ಮರಮರಳಿ ಬರುವಂತೆ
ನೆನಪಿನಲೆಗಳ ಸಾಲು ಹಾಯುತ್ತಿತ್ತು|
ಶೃಂಗಾರ ರೌದ್ರಗಳು ಕರಗಿ ಪಡಿಮೂಡಿರುವ
ಶಾಂತಿಯನು ತಂಗಾಳಿ ನೀಡುತ್ತಿತ್ತು||

ಈ ಸಂಜೆ ಕೊನೆಯಲ್ಲ ನಿಶೆ ಬರಲಿ ನೋವಿಲ್ಲ
ಎಂಬ ಹಾಡನು ಹಕ್ಕಿ ಹಾಡುತ್ತಿತ್ತು |
ಇರುಳು ಬೇಗನೆ ಉರುಳಿ ರವಿಕಿರಣ ಬರಲೆಂದು
ಮುದುಡುತಿಹ ತಾವರೆಯು ಬೇಡುತ್ತಿತ್ತು ||

೨೨/೦೪/೨೦೨೩



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ