ಮದ್ಯ-ಪದ್ಯ

ಅರಿತವರು ಯಾರಿಲ್ಲ ಕುಡುಕನೊಳ ಮನವನ್ನು
ಬರಿದೆ ತೆಗಳುವುದವನ ತಪ್ಪು ತಾನೆ?/
ಸರಿತಪ್ಪು ಹೇಳುವುದಕನುಭವವು ಬೇಕಲ್ಲ,
ಸುರೆಯನ್ನು ನಾನಷ್ಟು ಕುಡಿಯಲೇನು?//[೧]

ಹಳೆಯದಾಗಿದೆಯೆಂದು ಹಳಹಳಿಸದಿರು ನೀನು
ಹುಳಿ ಬಂದರೇನಂತೆ ನಶೆಯದೇ ಹೌದು/
ಕಳವಳವ ಕಳೆದಿಟ್ಟು ಕುಡಿಯಲೀ ಸುರೆಯನ್ನು
ಹೊಳೆಯಾಗಿ ಹರಿವುದಾ ಕಾವ್ಯ ಸುಧೆಯು// [೨]

ಸುರರೆಲ್ಲ ಸೇವಿಸಿದ ಪಾನಕವೆ ಸುರೆಯಹುದು
ತಿರುಕರೂ ತಾವದನು ಬಿಡುವುದಿಲ್ಲ/
ಹಿರಿಕಿರಿಯರೆಂದೆಂಬ, ಬಡವ ಬಲ್ಲಿದರೆಂಬ
ಬಿರುಕನ್ನು ಮರೆಯಲಿಕೆ ಕುಡಿಯಿರೀಗ//[೩]

ಹೆಂಡತಿಯ ಕೇಳಿದೆನು ಮೆಲುದನಿಯ ಬಳಸುತಲಿ
ಹೆಂಡ ಕುಡಿಯಲು ನಾನು ಹೋಗಿ ಬರಲೇ?/
ಗಂಡ ಹೆಂಡತಿಯೆಂಬ ಭೇದವದು ಸುರೆಗಿಲ್ಲ
ಕೊಂಡು ಬನ್ನಿರಿ ನನಗೆ ಎಂದಳಾಕೆ!//[೪]

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ