ಪೋಸ್ಟ್‌ಗಳು

ಮಾರ್ಚ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಛಂದದ ಹರಟೆ

ಉಮಾಶಂಕರರು 'ವಿಹಾ' ಎಂಬ ಚಂದದ ಪದ್ಯವನ್ನು ಪ್ರಾಚೀನ ಕಾಲದಲ್ಲಿ ಬರೆದಿದ್ದು, ದುರದೃಷ್ಟವಶಾತ್ ಅದೀಗ ಲಭ್ಯವಿಲ್ಲ. ಆದರೆ ಈ ಕೆಳಗಿನ ಹರಟೆಯಿಂದ ನೀವು ಅದರ ಸಾರಾಂಶವನ್ನು ಗ್ರಹಿಸಬಹುದು.  ' ವಿಹಾ' ಪದ್ಯಕ್ಕೆ ಸುಮುಖರ ಪ್ರತಿಕ್ರಿಯೆ- ಕಾಳಿದಾಸ ಮೋಡ ನೋಡಿ ದೂತ ಪದ್ಯ ಬರೆದರೆ, ಮಗುವನೊಂದ ನೋಡಿ ನೀವು ಪದ್ಯ ಬರೆದಿರಲ್ಲವೆ!  ಶಬ್ದ-ರಸದ ಬರವು ಬಂದು ನಾನು ಸುಮ್ಮನಾಗಿಹೆ, ಶಾರದೆಯನು ಒಲಿಸಿಕೊಂಡ  ಗುಟ್ಟು ತಿಳಿಸಬಾರದೆ? ಅಂದ ಹಾಗೆ ವಿಹಳ ಬಗೆಗೆ ನಮಗು ಸ್ವಲ್ಪ ಹೇಳಿರಿ| ಆರು ಆಕೆ ಊರು ಎತ್ತ  ಎಂಬುದನ್ನು ತಿಳುಹಿರಿ|| ನನಗೆ ಆಕೆಯನ್ನು ಒಮ್ಮೆ ನೋಡಿದಂತೆ ಅನಿಸಿತು| 'ನಿಮ್ಮ ಸೊಸೆಯೆ?' ಎಂಬ ಪ್ರಶ್ನೆ ಮನಸಿನಲ್ಲಿ ಮೂಡಿತು|| ಉಮಾಶಂಕರ್- ಕಾಳಿದಾಸನೆದುರು ನಾನು ಕಲಭದೆದುರಿನಿರುವೆಯು| ಮನಸಿಗೇನು ಬಂತೊ ಅದನೆ ಬರೆವುದೊಂದೆ ಕೆಲಸವು|| ಛಂದವಿಲ್ಲ ಪ್ರಾಸವಿಲ್ಲ! ಲಯವ ಕೊಂಚ ನಂಬಿಹೆ| ರಸಧ್ವನಿಗಳುಸಿರೆ ಇಲ್ಲ ಪದ್ಯಬರೆದೆನೆಂದಿಹೆ|| ಶಾರದೆಯನ್ನೊಲಿಸಿಕೊಂಡ ಗುಟ್ಟು ಬೇಕು ಎಂದಿರಿ| ಅಯ್ಯೊ ಆಕೆ ಎನಗೆ ಒಲಿದ ಳೆಂದು ಪೇಳ್ದರಾರು ರೀ?|| ಆಕೆಗೀಗ ಮಲೆಯನಾಡಿ ನಲ್ಲೆಯಂತೆ ವಾಸವು| ನೀರುಗಾರಿನೂರ ಸುಮುಖ- ರಲ್ಲೆಯಂತೆ ಪೂಜೆಯು|| ಎನಗೆ ಒಲಿದ ದೇವಿ ಲಕುಮಿ, ಎಂತದೆಂದು ಕೇಳ್ದಿರಾ| ಸುಮುಖ ಸಖ್ಯವನ್ನು ತಗುವ ಶ್ರೀಯ ಪೇಳಬಲ್ಲಿರಾ?|| ---- ಜ್ಞಾನಸುಧಾ ಪದವಿ ಪೂರ್ವ ವಿದ್ಯಾಲಯ ಬಲ್ಲಿರಿ| ನಾನು ಹರುಷದಿಂದ ವರುಷ ವೊಂದ ಕಳೆದುದಲ್ಲ...

ಆರ್ಸಿಬಿಗೆ ಕೃಷ್ಣ

ಇಮೇಜ್
ಮ್ಯಾಚು ಆರಾಯ್ತು ಬಹಳ ಕಾದಾಯ್ತು ಜಯವು ಸಿಗಲೆ ಇಲ್ಲ / ಎಬಿಡಿಯಿದ್ದರೂ ಕೊಹ್ಲಿ ಸಿಡಿದರೂ ವೆರ್ತವಾಯಿತೆಲ್ಲ// 'ಕಪ್ಪು ನಮ್ಮದೇ' ಎಂಬ ಘೋಷವದು ಸತ್ಯವಾಗಬೇಕೆ?/ ಒಮ್ಮೆ ಕಿಟ್ಟನನು ಟೀಮ್ಗೆ ಸೇರಿಸಿರಿ, ಹಾಕಿ ಜಯದ ಕೇಕೆ// ೧೩/೦೪/೨೦೧೯ ('ಈ ಸಲ ಕಪ್ಪು ನಮ್ದೇ' ಅಂತ ಎಷ್ಟು ಸಲ ಹೇಳಿದ್ರೂ ಆರ್ಸಿಬಿಗೆ ಇಲ್ಲಿ ತನಕ ಸಿಕ್ಕಿರೋದು ಚಿಪ್ಪು ಮಾತ್ರ. ಆರ್ಸಿಬಿ ಪ್ರತಿ ಪಂದ್ಯ ಸೋತಾಗಲೂ ಅಭಿಮಾನಿಗಳು ದೊಡ್ಡಗೌಡ್ರ ಕುಟುಂಬದವರ ತರ ಅಳ್ತಾ ಇರ್ತಾರೆ. ಕೆಲವು ಅಭಿಮಾನಿಗಳೆಂತೂ ಉರಿ ಸಿನೆಮಾದಲ್ಲಿ ಅಜಿತ್ ಧೋವಲ್ ಮುರಿದ ಮೊಬೈಲಿಗಿಂತಲೂ ಜಾಸ್ತಿ ಟಿವಿ ಮುರಿದಿದ್ದಾರೆ ಅಂತ ಸುದ್ದಿ ಇದೆ. ಆದರೆ ವಿರಾಟ್ ಕೊಹ್ಲಿ ಮಾತ್ರ ತನ್ನನ್ನು ಎಷ್ಟು ತಮಾಷೆ ಮಾಡಿದ್ರೂ, ಯಾರೂ ಕೂಡ ಅನುಷ್ಕಾಳ ಟ್ರೋಲ್ ಮಾಡ್ತಾ ಇಲ್ವಲ್ಲಾ ಅಂತ ಸಮಾಧಾನ ಮಾಡ್ಕೊಂಡು ಖುಷಿಖುಷಿಯಾಗಿಯೇ ಆರು ಪಂದ್ಯಗಳನ್ನು ಸೋತಿದ್ದಾನೆ. ಮಲ್ಯ ಓಡಿ ಹೋದರೂ ದೋಷ ಇನ್ನೂ ಉಳಿದಿರುವುದೇ ಸೋಲಿಗೆ ಕಾರಣ ಅಂತ ಬೇರೆ ಕೆಲವರ ಅಂಬೋಣ. ದೋಷ ನಿವಾರಣೆ ಮಾಡಿಸೋಣವೆಂದರೆ ಕಣ್ಣೀರಣ್ಣ ಒಂದು ನಿಂಬೆ ಹಣ್ಣನ್ನೂ ಉಳಿಸಿಲ್ಲವಂತೆ. ನನಗೂ ನೋಡಿ ನೋಡಿ ಸಾಕಾಯ್ತು. ಹಾಗಾಗಿ ಆರ್ಸಿಬಿ ಗೆಲುವು ಕಾಣುವಂತಾಗಲು ನಾನೊಂದು ಸಲಹೆ ಕೊಡುತ್ತೇನೆ. ಅದು ವಿರಾಟ್ ಕೊಹ್ಲಿಗೆ ತಲುಪುವ ತನಕ ಶೇರ್ ಮಾಡಿ :-) Dedicated to all #RCB_fans.)

ದನ-ಕರು

ಕಾಂಕ್ರೇಜ್ ಓಂಗೋಲ್ ಮಾಳವಿ ಗಿರ್ ಕೃಷ್ಣ ಹರಿಯಾರ ಥಾರ್ ಪಾರ್ಕರ್ ದಾಂಗಿ ದೆವನಿ ಬರಗೂರು ರಾಟಿ ಸಿಂಧಿ ಹಳ್ಳಿಕಾರು ಜೊತೆಗೆ ಸೇರಿತು ಕಂಗಾಯಂ ಇವಿಷ್ಟು ಶ್ರೀಮಠದಲ್ಲಿ ಖಾಯಂ (ನಾನು ಪ್ರಾಥಮಿಕ ಶಾಲೆಗೆ ಹೋಗುವ ಸಮಯದಲ್ಲಿ ಶ್ರೀರಾಮಚಂದ್ರಾಪುರಮಠದ ಪತ್ರಿಕೆಯ ಪುರವಣಿಯಲ್ಲಿದ್ದ ಗೋವುಗಳ ಹೆಸರುಗಳನ್ನು ನಾನು ಹೀಗೆ ಜೋಡಿಸಿದ್ದೆ)

ಬಸವ

ಊರು ಕೇರಿಯ ಸುತ್ತಿ ಬಂದೆವಿಲ್ಲಿಗೆ ನಾವು ದಾರಿಯನು ಕೊಡಿರೆಮಗೆ, ಕೊಂಚಮಾತ್ರವೆ ಸಾಕು ತೂರಿ ಸಾಗುತಲಲ್ತೆ ಆಧುನಿಕ ಲೋಕದೊಳು ಜೀವನವ ಮಾಡಿರ್ಪೆವು | ಸಾರಿ ಹೇಳುತಲಿಹೆವು, ಜಾಣ ಮನುಜರೆ ನಿಮಗೆ ಹೋರಿ-ಮಾನವನೆಂಬ ಭೇದವದು ನಮಗಿಲ್ಲ ಸೇರಿ ಜೀವನ ಮಾಳ್ಪ ಸಂಸ್ಕೃತಿಯ ಕುರುಹಾಗಿ ನಾವಿಂದು ಉಳಿದಿರ್ಪೆವು ||

ಅಭಿಜಾತ vs ಅಣಕು

ಉಮಾಶಂಕರ: ಕಾಡನಡುವಲೊಂದು ಪುಟ್ಟ ಹೆಂಚು ಮನೆಯ ಮಾಡಿಕೊಂಡು ಧಾರೆಯಾಗಿ ಬೀಳ್ವ ಮಳೆಯ ನೋಳ್ಪ ಕನಸಿದೆ| ಓಡಿ ಬರುವ ತರಗೆಲೆಗಳ ಮೇಲೆ ಕುಳಿತು ಬರುವ ಗಾಳಿ ಭೋರುಭೋರನೆನಲು ಬೆಚ್ಚಿ ಬೀಳಬೇಕಿದೆ| ಹೊರಗೆ ಗುಡುಗು ಸಿಡಿಲು ಜಗಳ ವಾಡುತಿರಲು ಮನೆಯ ಮಡಿಲ ಮಸುಕು ಮೂಲೆಯಲ್ಲಿ ಕಳೆದು ಹೋಗಬೇಕಿದೆ| ಜಗದ ರೂಕ್ಷ ಗದ್ದಲಗಳ ಮರೆತು ಮತ್ತೆ ಮನವ ತಣಿಪ ಬೆಳಗು ಬೈಗು ವಿಧುವ ಸುಧೆಯ ಸವಿಯಬೇಕಿದೆ| ಪಂಚಭೂತವೆಲ್ಲವುಗಳ ಶಕ್ತಿಯೆದುರು ನನ್ನತನವು ಇಲ್ಲವಾಗಿ ಅವುಗಳನ್ನು ಸೇರಬೇಕಿದೆ| ಸುಮುಖ : ಮನೆಯ ಹೆಂಚು ಸೋರುತಿರಲು ಹಾಳೆ ಸೋಗೆಗಳನು ಕಟ್ಟಿ ಒಳಗೆ ನೀರು ಸುರಿಯದಂತೆ  ತಡೆಯಬೇಕಿದೆ| ಭೋರು ಗಾಳಿಗಲ್ಲಿ ಸಿಕ್ಕಿ ಟಪ್ಪೆನುತ್ತ ಅಡಿಕೆ-ಬಾಳೆ ಮುರಿದು ಬೀಳೆ ಅಯ್ಯೊ-ಶಿವನೆ ಎನ್ನಬೇಕಿದೆ| ಹೊರಗೆ ಕೆಸರ ಕಾಲು ತೊಳೆದ ಬಳಿಕ ಸಿಗುವ ಜಿಗಣೆಗಳನು ಬಚ್ಚಲೊಲೆಯ ಮೂಲೆಗೆಸದು ಕೊಲ್ಲಬೇಕಿದೆ| ಬೆಟ್ಟದಿಂದ ನೀರು ಹರಿದು  ಅಂಗಳಕ್ಕೆ ನುಗ್ಗಿ ಬರಲು ಅಡ್ಡಕಟ್ಟೆಯನ್ನು ಕಟ್ಟಿ  ಬದುಕಬೇಕಿದೆ| ಪಂಚಭೂತವೆಲ್ಲವುಗಳ ಶಕ್ತಿಯೆದುರು ವಿದ್ಯುಚ್ಛಕ್ತಿ ಇಲ್ಲವಾಗೆ ಚಿಮಣಿಯನ್ನು ಹಚ್ಚಬೇಕಿದೆ| ೧೩/೦೬/೨೦೨೪

ಅನುವಾದ-೭

  ಭರ್ತೃಹರಿ: ಯಾಂ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ ಸಾಪ್ಯನ್ಯಮಿಚ್ಛತಿ ಜನೋಪ್ಯಯಮನ್ಯಸಕ್ತಃ| ಅಸ್ಮತ್ಕೃತೇ ಚ ಪರಿತುಷ್ಯತಿ ಕಾಚಿದನ್ಯಾ ಧಿಕ್ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ||   ಅನುವಾದ: ನಾನು ಯಾವಳನು ಸದಾ ನೆನೆಯುವೆನೊ ಆಕೆಗಾನು ಬೇಡ ಆಕೆ ಕಾಮಿಸುವವನಿಗೆ ಪ್ರೀತಿ ಇನ್ನೊಬ್ಬಳಲ್ಲಿ, ನೋಡ|| ಆ ತರುಣಿ ನೋಡೆ ತನ್ನ ಒಲುಮೆಯನು ಇಟ್ಟಳೆನ್ನ ಒಳಗೆ  ಧಿಕ್ಕಾರವಿರಲಿ! ಈ ನಾಲ್ವರಿಂಗೆ ಮತ್ತೆ ಮನ್ಮಥಂಗೆ||

ಅನುವಾದ-೬

 ಮೂಲ: ಅಖಿಲೇಷು ವಿಹಂಗೇಷು ಸತ್ಸು ಸ್ವಚ್ಛಂದಚಾರಿಷು| ಶುಕ ಪಂಜರಬಂಧಸ್ತೇ ಮಧುರಾಣಾಂ ಗಿರಾಂ ಫಲಮ್|| ಸುಮುಖಾನುವಾದ: ಮನಬಂದ ಕಡೆಗೆಲ್ಲ ಹಾರುವವು ಹಕ್ಕಿಗಳು ಬಾನಿನಗಲಕ್ಕೆಲ್ಲಿ ಮೇರೆಯುಂಟು? ಪಂಜರದ ಗಿಳಿಗಳಿವೆ ಬಂಧನದ ಬಿಗಿಯೊಳಗೆ  ಮಧುರ ನುಡಿಗಳಿಗಿಷ್ಟೆ ಜಾಗವುಂಟು!

ಲೋಹಪುರುಷ

ಹರಿದ ಬಟ್ಟೆಯ ತೆರದಿ ಹಂಚಿಹೋಗಿರೆ ದೇಶ ಹಿರಿಯ ನಾಯಕರೆಲ್ಲ ಕಣ್ಮುಚ್ಚಿ ಕುಳಿತಿರಲು  ಮುರಿದು ಬೀಳುತಲಿದ್ದ ಭಾರತವ ಹಿಡಿದಿಟ್ಟ ಲೋಹಪುರುಷಗೆ ನಮಿಪೆನು| ದೊರೆಗಳೆಲ್ಲರ ಕರೆದು ಪರಿಪರಿಯ ಹಿತವಾಡಿ ಬರದಿದ್ದ ಭಂಡರನು ಬಲದಿ ಮರ್ದನ ಮಾಡಿ  ಸರದಾರನೆನಿಸಿರುವ ವಲ್ಲಭನ ಪುತ್ತಳಿಯ ದರುಶನವ ಪಡೆಯೋಣ ಬಾ||

ಗೊಮ್ಮಟೇಶ್ವರ

ಇಮೇಜ್
ಅಳಿದು ಹೋಗುವ ಮರ್ತ್ಯ ಲೋಕದಿ ಬಲವು ರಾಜ್ಯವು ಸೊಗವ ಕೊಡುವುದೆ ಹಲವು ಸಾಧಿಸೆ ವೆರ್ತವೆಂಬುದನರಿತ ಬಾಹುಬಲಿ| ಉಳಿವತೀಂದ್ರಿಯ ಸುಖವ ಪಡೆಯಲು ಕಳೆದು ಬದುಕಿನ ಮೋಹವೆಲ್ಲವ ಸುಲಭದಿಂದಲಿ ಭವದ ಬಂಧವ ಕೆಡುಹಿ ನಿಂತಿಹನು|| ೧೦/೦೪/೨೦೧೯

ಬಾಳ ಸಂಜೆ

ಇಮೇಜ್
ಬಾಲ ಬೆಳಗದು ಕಳೆದು ಯೌವನದ ಬಿಸಿ ಮುಗಿದು ಮುಸ್ಸಂಜೆಯಿಳಿ ಬೆಳಕು ಬೀಳುತ್ತಿತ್ತು| ಕಾಲಚಕ್ರವು ತಿರುಗೆ ತಾನದನು ಆಧರಿಸಿ ಬಾಳಬಂಡಿಯು ಮುಂದೆ ಸಾಗುತ್ತಿತ್ತು|| ದಿನದ ಘಟನೆಗಳೆಲ್ಲ ಮರಮರಳಿ ಬರುವಂತೆ ನೆನಪಿನಲೆಗಳ ಸಾಲು ಹಾಯುತ್ತಿತ್ತು| ಶೃಂಗಾರ ರೌದ್ರಗಳು ಕರಗಿ ಪಡಿಮೂಡಿರುವ ಶಾಂತಿಯನು ತಂಗಾಳಿ ನೀಡುತ್ತಿತ್ತು|| ಈ ಸಂಜೆ ಕೊನೆಯಲ್ಲ ನಿಶೆ ಬರಲಿ ನೋವಿಲ್ಲ ಎಂಬ ಹಾಡನು ಹಕ್ಕಿ ಹಾಡುತ್ತಿತ್ತು | ಇರುಳು ಬೇಗನೆ ಉರುಳಿ ರವಿಕಿರಣ ಬರಲೆಂದು ಮುದುಡುತಿಹ ತಾವರೆಯು ಬೇಡುತ್ತಿತ್ತು || ೨೨/೦೪/೨೦೨೩

ಅಂದು-ಇಂದು

ಅಂದು ಶಾಲೆಗೆ ನಿಮ್ಮಯ ಮಗುವನು ಕಳುಹಿಸಿ ವರುಷವು ತಾನಾರಾಗುರಲಿ | ಆಟವನಾಡುತ ಕಲಿವನು ಪಾಠವ ಮಗ್ಗಿಯ ಬಳ್ಳಿಯ ಚಂದದಲಿ || ಇಂದು ಮೂರನೆ ವರುಷವು ತುಂಬುವ ಮೊದಲೇ ಕೇಜಿಯ ಶಾಲೆಯು ಕರೆವುದಲಾ | ಹುಟ್ಟುವ ಮೊದಲೇ  ಶಾಲೆಗೆ ಸೇರುವ ಕಾಲವು ಬರುವುದು ನೋಡಿರಲಾ ||

ಮೈಸೂರು ಡೈರಿ

ಸ್ವಾಮಿಗಳ ಬರಹಗಳ ಮಣಿರತ್ನಹಾರದಲಿ ಹೊಳೆಯುತಿಹ ಹವಳವಿದು ಮೈಸೂರು ಡೈರಿ ಅದನೋದಿದಂಕಿತೆಯು ಬರೆದಿರ್ಪ ಟಿಪ್ಪಣಿಯು ಮತ್ತಷ್ಟು ರುಚಿಯಾಯ್ತು 'ಚಾ'ದೊಡನೆ ಸೇರಿ

ಸಹಜ ಬದುಕು

ಇರುವೆಗಳಿಗಾ ಸಿಹಿಯ ಜೇನುದುಂಬಿಗೆ ಮಧುವ ತೋರಿ ಹೇಳಲು ಬೇರೆ ಯಾರು ಬೇಕು? ಎನ್ನ ಇನಿಯಳ ಮನವ ಎನ್ನ ಗೆಳತಿಯ ಮುದವ- ನರಿತು ಬಾಳಲು ಅದುವೆ ಸಹಜ ಬದುಕು

ತ್ರಿಪದಿ

ನೀರ್ಪಾಜೆಯೂರಿಂದ ಬಂದಂತ ಸಿರಿಗೌರಿ ನೀರ್ಗಾರಿನೂರ ಸೊಸೆಯಿನ್ನು/ತಾಯವ್ವ ಆರತಿ ಬೆಳಗಿ ಹರಸಿsರಿ

ಅಂಕಿತಾ

ಊರ ಬಂಧುಜನರೆ ನೀವು ಏನು ನೋಡುತಿರುವಿರಿ? ಮನೆಗೆ ಬಂದ ಭಾಗ್ಯಲಕ್ಷ್ಮಿಯನ್ನು ಒಳಗೆ ಕರೆಯಿರಿ ಮನದ ತುಂಬ ಪ್ರೀತಿ ತುಂಬಿ ಮೊಗದಿ ನಗೆಯ ಬೀರುತಾ ಇರುವಳಲ್ಲ ಅವಳೆ ಎನ್ನ ಮುದ್ದು ಮಡದಿ ಅಂಕಿತಾ

ಕರುಣಾಳು ಬೆಳಕು

ಬಾನ ದಾರಿಯಲಿ ಮೂಡಿಬಂದಿರುವ ಭಾನುವನ್ನು ಕಂಡು | ಹರ್ಷಗೊಳ್ಳುತಲಿ ಹಾರಿ ಬರುತಲಿದೆ ನೋಡು ಹಕ್ಕಿಹಿಂಡು || ಕವಿದ ಕತ್ತಲನು ಮಾಯ ಮಾಡಿದನು ಸೂರ್ಯ ರಶ್ಮಿಯಿಂದ | ಉದಯ ಕಾಲದಾ ದೃಶ್ಯ ಕಾವ್ಯವಿದು ನೋಡು ಎಂಥ ಚಂದ || ಜೀವ ಜಂತುಗಳು ಬದುಕ ನಡೆಸುವವು ರವಿಯ ಬೆಳಕ ಪಡೆದು | ಕಾಲಚಕ್ರವದು ತಿರುಗುತಿರುವುದೇ ಅವನ ಗತಿಯ ಹಿಡಿದು || ಜನಗಳೆಲ್ಲರೂ ಹೊರಟು ನಿಂತಿಹರು ತಮ್ಮ ಕೆಲಸವರಸಿ | ಬಾಲಭಾಸ್ಕರ‌ನು ಜೀವ ತುಂಬಿಹನು ಜಡವ ಬದುಗೆ ಸರಿಸಿ ||

ಅನುವಾದ-೧

 दष्टान्तकलिकाशतक: शिवस्मरणमेवैकं संसारान्तकनाशनम्। घनौघो घोरदावाग्निनिर्वापणपटुर्भवेत्॥  ಅನುವಾದ: ಶಿವನಾಮವೆಂಬುವುದುಪಾಯವೀ ಲೋಕದೊಳು ಭವಬಂಧವೆಂದೆಂಬ ಜವನ ನೀಗಿಸಲು/ ಕವಿದ ಕಾರ್ಮೋಡಗಳು ಮಳೆನೀರನಿಳೆಗಿಳಿಸೆ ದವದಹನ ತಾನಾರಿ ಹೋಗುವಂತೆ// [೧]

ಅನುವಾದ-೨

दृष्टान्तकलिकाशतक : साधुरेव प्रवीणः स्यात् सद्गुणामृतवर्णने। नवचूताङ्कुरस्वादकुशलः कोकिलः किल॥ ಅನುವಾದ: ಹೊಗಳಲಿಕೆ ಸಜ್ಜನರ ಸದ್ಗುಣದ ಸುಧೆಯನ್ನು ಸುಗುಣವಂತರಿಗಷ್ಟೆ ಶಕ್ಯವಹುದು| ಚಿಗುರೊಡೆದ ಮಾಮರದ ಪರ್ಣಗಳ ಸವಿಯಲಿಕೆ   ಸಿಗುವುದಾ ಕೋಗಿಲೆಗೆ ಮಾತ್ರ ತಾನೆ||[ ೨]

ಅನುವಾದ-೩

 ಬಿಲ್ಹಣ:  ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟೋ ಭಿಕ್ಷುರ್ನಷ್ಟೋ ಭೀಮಸೇನೋಪಿ ನಷ್ಟಃ| ಭುಕ್ಕುಂಡೋಹಂ ಭೂಪತಿ ತ್ವಂ ಹಿ ರಾಜಾ ಭಂಭಾವಲ್ಯಾಂ ಅಂತಕ ಸನ್ನಿವಿಷ್ಟಃ|| ಅನುವಾದ:  ಭಟ್ಟಿ ಭಾರವಿಗಳೆಲ್ಲ ಮುಗಿಸಿದರು ತಮ್ಮ ಜೀವ ಯಾನ ಭಿಕ್ಷು ಪ್ರಾಣವನು ತ್ಯಜಿಸಿ ತೆರಳಿದನು, ಬಳಿಕ ಭೀಮಸೇನ|| ನಾನು ಭುಕ್ಕುಂಡ, ನೀನು ಭೂಪತಿಯು; ಸರತಿ ಸಾಲಿನಲ್ಲಿ ಮೇಲೆ ಕುಳಿತಿರುವ ಯಮನು ಗಣಿಸುತಿಹ ಭಭಾಭಿಭೀ ಬಳ್ಳಿ||‌‌ [೩]

ಅನುವಾದ-೪

 ಕಾಳಿದಾಸ: ಇಹ ನಿವಸತಿ ಮೇರುಃ ಶೇಖರಃ ಕ್ಷ್ಮಾಧರಾಣಾಂ ಇಹ ವಿನಿಹತ ಭಾರಾಸ್ಸಾಗರಾ ಸಪ್ತ ಚಾನ್ಯೇ| ಇದಮಹಿಮತಿಭೋಗಸ್ತಂಭವಿಭ್ರಾಜಮಾನಾಂ  ಧರಣಿತಲಮಿಹೈವ ಸ್ಥಾನಮಸ್ಮದ್ವಿಧಾನಾಮ್|| ಅನುವಾದ: ಇದೇ ಜಾಗದಲಿ ಬೆಟ್ಟದೊಡೆಯ ಮಾಮೇರು ನಿಂತನಲ್ಲ ಇಲ್ಲೇಳು ಜಲಧಿಗಳು ಭಾರವಿಳಿಸಿ ಹಗುರವಾದವೆಲ್ಲ ಇದೇ ತಾನೆ ಕಂಗೊಳಿಸುತಿಹುದು ಶೇಷನಾಧಾರದಿಂದ ಈ ಭೂಮಿಯಲ್ಲಿ ಆಸೀನನಾಗೆ ಅದೇ ನಮಗೆ ಚಂದ|| [೪]

ಅನುವಾದ-೫

का त्वं बाले ! काञ्चनमाला कस्याः पुत्री ? कनकलतायाः । हस्ते किं ते ? तालीपत्रं का वा रेखा ? क ख ग घ ॥ ಅನುವಾದ: ಯಾರೀ ಬಾಲಿಕೆ? ಕಾಂಚನ ಮಾಲೆಯು ಯಾರಿಗೆ ಮಗಳಿಹೆ? ಕನಕಲತಾಳಿಗೆ ಕರದೊಳಗೇನದು? ತಾಳೆಯ ಗರಿಗಳು ಬರೆದಿಹೆಯೇನನು? ಕ ಖ ಗ ಘ Genz version: ಯಾರೀ ಬಾಲಿಕೆ? ಕಾಂಚನ ಮಾಲೆಯು ಯಾರಿಗೆ ಮಗಳಿಹೆ? ಕನಕಲತಾಳಿಗೆ ಕರದೊಳಗೇನದು? ಐಪ್ಯಾಡ್ ಪೆನ್ಸಿಲ್ ಬರೆದಿಹೆಯೇನನು? ಎ ಬಿ ಸಿ ಡಿ

ಪುಂಡರೀಕನ ಪದ-೩

ರಕ್ಷಿಸುವೆ ನಾ ಪಾದಗಳನೆಂಬ ಹಮ್ಮಿಲ್ಲ ರಕ್ಷಣೆಯು ತನಗಿಲ್ಲವೆಂಬ ಭಯವಿಲ್ಲ/ ತಕ್ಷಣಕೆ ನೆರವಾಗಿ ಬದಿಗೆ ಸರಿಯುವ ಪಾದ- ರಕ್ಷೆಯಂದದಿ ಬಾಳು ಪುಂಡರೀಕ//

ಪುಂಡರೀಕನ ಪದ -೨

ಕಾಳಿದಾಸನು ದಡ್ಡನಾಗಿದ್ದನಲ್ತೊಮ್ಮೆ ಖೂಳನವ ಬದಲಾಗಿ ವಾಲ್ಮೀಕಿಯಾದ ಲೀಲೆಯಂದದಿ ಜಗವ ತಾನಾಡಿಸುತಲಿರುವ ಕಾಲಕ್ಕೆ ಕೈಮುಗಿವೆ ಪುಂಡರೀಕ [೨]

ಪುಂಡರೀಕನ ಪದ-೧

ತೈಲ ದೇಶದಲೆಲ್ಲ ಹಸಿರಿದ್ದ ಸಮಯವಿರೆ ಸಾಲು ತುಪ್ಪಳದಾನೆ ಬದುಕಿ ಬಾಳಿತ್ತು ಬಾಲವನು ಹೊಂದಿದ್ದ ಮನುಜ ತಾನಿದ್ದನೆನೆ ಕಾಲಕ್ಕೆ ನಮಿಸಯ್ಯ ಪುಂಡರೀಕ

ಉಮಾಶಂಕರ ಕಲ್ಯಾಣ

ಮಾಸ್ಟರ್ಸೋದನು ಮುಗಿಸಿದ ಶಂಕರ; ಪೀಹೆಚ್ಡೀಯೂ ಮುಗಿದಾಯ್ತು/ "ಇನ್ನೇನಂತೇ?", "ಮತ್ತೇನಂತೇ?" ಎನ್ನುವ ಪ್ರಶ್ನೆಯು ಶುರುವಾಯ್ತು// ಪ್ರಾಯದ ಮಗನಿಗೆ ಮದುವೆಯ ಮಾಡುವ ಯೋಚನೆ ಹೆಣೆದರು ಮನೆಯವರು/ ಸುಂದರ ಮಾಣಿಗೆ ಹೊಂದಿಕೆ ಬರುವಾ ಚಂದದ ಕೂಸನು ಅರಸಿದರು// ವಿದ್ಯದಿ, ಬುದ್ಧಿಲಿ, ವಿನಯದಿ, ರೂಪದಿ ಶಂಕರನಂದದಿ ಯಾರಿಲ್ಲ/ ಸಾಕ್ಷಾತ್ ದೇವತೆಯಂದದಿ ಕಾಣುವ ಹೆಣ್ಣನು ತೋರಿಸಿ ಕೊಡಿರಲ್ಲ// ಓಹೋ! ಸಿಕ್ಕಳು, ಉಮೆಯಂತಿರುವಳು; ಸುಭಗ ಸಮೀಕ್ಷಾ ನಾಮದಲಿ/ ನೋಡಿದ್ದಾಯ್ತು, ಇಷ್ಟವು ಆಯ್ತು, ಒಪ್ಪಿಗೆಯಿತ್ತರು ಪ್ರೇಮದಲಿ// ತಡವಿನ್ನೇಕೆ? ಓಲಗ ಊದಿಸಿ ಪಾಯಸದೂಟವ ಹಾಕಾಯ್ತು/ ನವದಂಪತಿಗಳ ನೂತನ ಬದುಕಿಗೆ ಶುಭವನು ಕೋರಿಯೆ ಬಂದಾಯ್ತು// ಇಲ್ಲಿಗೆ ಮುಗಿಯಿತು ಮದುವೆಯ ಕಥನವು ಹೇಳಿದ ಕೇಳಿದ ತಮಗೆಲ್ಲಾ/ ಸಿಕ್ಕಲಿ ಖುಷಿಯೂ, ಮುಖದಲಿ ನಗೆಯೂ; ಇಷ್ಟನು ಬಿಟ್ಟರೆ ಬೇರಿಲ್ಲಾ// ೧೪/೦೧/೨೦೨೫

ನೂತನ ಬದುಕು

ಇಮೇಜ್
ಬಾರೆ ಗೆಳತಿಯೆ ನಾವು ನೂತನ ಬದುಕನೊಂದನು ಕಟ್ಟುವ/ ನಾನು ನೀನುಗಳೆಂಬ ದ್ವೈತವ ಮರೆವ ತೆರದಲಿ ಬದುಕುವ// ಎಂತು ಲತಿಕೆಯು ಮರವನಪ್ಪಿಯೆ ಉನ್ನತೋನ್ನತಗೊಂಡಿತೋ/ ಅಂತೆ ನೀನೂ ಎನ್ನನೊಪ್ಪುತ ಜೀವಿತಾರ್ಥವ ಪಡೆದುಕೋ// ಪಕ್ಷಿಯೆಂದಿಗು ಧರೆಗೆ ಪಂಜವ- ನಿರಿಸಿ ನೆಲೆಯನು ಪಡೆವುದು/ ನಾನು ಅಂತೆಯೆ ಮನವ ನಿನ್ನೊಳ- ಗಿರಿಸಿ ಸಾರ್ಥಕಗೊಳುವೆನು// ಉದಯ ಕಾಲದ ಸೂರ್ಯರಶ್ಮಿಯು ಜಗವ ಬೆಳಗುವ ತೆರದಲಿ/ ನನ್ನ ಮನವನು ನೀನು ತುಂಬಿಯೆ ಬಾಳ ಜ್ಯೋತಿಯ ಬೆಳಗಿಸು// ಸ್ವಾತಿ ಮಳೆಯದು ಕಪ್ಪೆ ಚಿಪ್ಪನು ಸೇರೆ ಮುತ್ತದು ಜನಿಪುದು/ ಅಂತೆ ಎನ್ನನು ನೀನು ಸೇರಲು ಬಾಳ್ಕೆಯಂದಿಗೆ ಪೂರ್ಣವು//

ಶಬರ

ಇಮೇಜ್
ಹಕ್ಕಿ ಹಿಂಡನ್ನೆಲ್ಲ ಬೇಟೆಯಾಡುವ ಶಬರ ಬಿಕ್ಕುತಳುವನು ತನ್ನ ಸತಿಗೆ ನೋವಾಗೆ/ ಸಿಕ್ಕಿಬಿದ್ದಿರೆ ಕುಲದ ಮೋಹಬಂಧನದಲ್ಲಿ ಸಿಕ್ಕುವುದು ಹೇಗೆಮಗೆ ಮುಕ್ತಿಯದ್ವೈತ?//

ಮದ್ಯ-ಪದ್ಯ

ಅರಿತವರು ಯಾರಿಲ್ಲ ಕುಡುಕನೊಳ ಮನವನ್ನು ಬರಿದೆ ತೆಗಳುವುದವನ ತಪ್ಪು ತಾನೆ?/ ಸರಿತಪ್ಪು ಹೇಳುವುದಕನುಭವವು ಬೇಕಲ್ಲ, ಸುರೆಯನ್ನು ನಾನಷ್ಟು ಕುಡಿಯಲೇನು?//[೧] ಹಳೆಯದಾಗಿದೆಯೆಂದು ಹಳಹಳಿಸದಿರು ನೀನು ಹುಳಿ ಬಂದರೇನಂತೆ ನಶೆಯದೇ ಹೌದು/ ಕಳವಳವ ಕಳೆದಿಟ್ಟು ಕುಡಿಯಲೀ ಸುರೆಯನ್ನು ಹೊಳೆಯಾಗಿ ಹರಿವುದಾ ಕಾವ್ಯ ಸುಧೆಯು// [೨] ಸುರರೆಲ್ಲ ಸೇವಿಸಿದ ಪಾನಕವೆ ಸುರೆಯಹುದು ತಿರುಕರೂ ತಾವದನು ಬಿಡುವುದಿಲ್ಲ/ ಹಿರಿಕಿರಿಯರೆಂದೆಂಬ, ಬಡವ ಬಲ್ಲಿದರೆಂಬ ಬಿರುಕನ್ನು ಮರೆಯಲಿಕೆ ಕುಡಿಯಿರೀಗ//[೩] ಹೆಂಡತಿಯ ಕೇಳಿದೆನು ಮೆಲುದನಿಯ ಬಳಸುತಲಿ ಹೆಂಡ ಕುಡಿಯಲು ನಾನು ಹೋಗಿ ಬರಲೇ?/ ಗಂಡ ಹೆಂಡತಿಯೆಂಬ ಭೇದವದು ಸುರೆಗಿಲ್ಲ ಕೊಂಡು ಬನ್ನಿರಿ ನನಗೆ ಎಂದಳಾಕೆ!//[೪]

ಹೊಸ ಮಾವು

ಹೊಸತು ವರುಷದೀ ಹೊಸತು ಮಾಂಬಳವ ಸವಿದು ನೀನು ತಿನ್ನು/ ಮುಂದೆ ಬರಲಿರುವ ಕೆಲಸ ಹೊಸತಿಹುದು, ಸಡಗರವು ಅದಕೆ ಎನ್ನು // ವರುಷವೆಲ್ಲವೂ ಹರುಷ ನಿನಗಿರಲಿ ಸಿಹಿಯ ಮಾವಿನಂತೆ/ ಸುಖದ ಸಂತಸದ ಹೊಳೆಯೆ ಹರಿಯಲದು , ಬರದೆ ಇರಲಿ ಚಿಂತೆ//

ಪ್ರಾಧ್ಯಾಪಕನ ಪೀಠದಲ್ಲಿದ್ದಾಗ ಕಂಡದ್ದು

ನಿದ್ದೆಗಣ್ಣನು ತೀಡಿ ತೆರೆಯುತ- ಲೆದ್ದು ಬರುವೆವು ನಿಮ್ಮ ಪಾಠಕೆ ಮೆದ್ದು ತಿಂಡಿಯ ಬರುವ ಹೊತ್ತಿಗೆ ಕೊಂಚ ತಡವಾಯ್ತು/ ಬಿದ್ದಿತೆಂದರೆ ಹಾಜರಾತಿಯು ಸಿದ್ಧಗೊಳುವೆವು ಹೊರಗೆ ಹೋಗಲು ಸದ್ದು ಮಾಡದೆ ಪಾಠ ಕೇಳುವುದೆಮಗೆ ತಿಳಿದಿಲ್ಲ// ಕದ್ದು ನೋಡುತ ಬರೆವೆವೆಗ್ಸಾಮ್ ಹದ್ದುಗಣ್ಣದನಿಡುವಿರೇತಕೆ ಶುದ್ಧ ಮನದಲಿ ನಕಲು ಮಾಡುವೆವನುವು ಮಾಡಿಕೊಡಿ/ ಜಿದ್ದಿನಂದದಿ ಕಳೆಯುತಂಕವ ಬುದ್ಧಿ ಹೇಳುತಲಿರುವ ಬದಲಿಗೆ ತಿದ್ದಿ ನೀವೇ ಮಾರ್ಕು ಸೇರಿಸಿ ಪಾಸು ಮಾಡಿಬಿಡಿ//

ಬರಗಾಲ ಮತ್ತು ತದನಂತರ

ಹಲವು ದಿನಗಳ ಕಾಲ ಕಂಬನಿಯನಿರಿಸಿತೊಲೆ, ಒಳಕಲ್ಲು ಒಳಗೊಳಗೆ ಅಳ್ಳುತಿತ್ತು/ ಹಲವು ದಿನಗಳ ಕಾಲ ಒಕ್ಕಣ್ಣ ಕರಿನಾಯಿ ಅವರ ಬಳಿಯಲ್ಲಿಯೇ ಮಲಗುತಿತ್ತು// ಹಲವು ದಿನಗಳ ಕಾಲ ಗೋಡೆಗಳ ಮೇಲೆಲ್ಲ ಹಲ್ಲಿಗಳ ಹರಿದಾಟ ಬಹಳವಾಯ್ತು/ ಹಲವು ದಿನಗಳ ಕಾಲ ಇಲಿಗಳದ್ದೂ ಕೂಡ ದಯನೀಯ ಜೀವನವದಾಗಿ ಹೋಯ್ತು// ಹಲವು ದಿನಗಳ ಮೇಲೆ ಧವಸ ಧಾನ್ಯಗಳೆಲ್ಲ ಮನೆಯನ್ನು ಸೇರಿದವು ಅಂತು ಇಂತು/ ಹಲವು ದಿನಗಳ ಮೇಲೆ ಹಿಂಬದಿಯ ಅಂಗಳದಿ ಕರಿಹೊಗೆಯು ಸಡಗರದಿ ಹೊಮ್ಮಿ ಬಂತು// ಹಲವು ದಿನಗಳ ಮೇಲೆ ಮನೆಜನರ ಕಣ್ಣುಗಳು ಸಂತಸವ ಬೀರುತ್ತ ಹೊಳೆದವಂದು/ ಹಲವು ದಿನಗಳ‌ಮೇಲೆ ಕಾಗೆಗಳು ರೆಕ್ಕೆಗಳ ಬಿಚ್ಚಿದವು ಅನ್ನವನು ಹೆಕ್ಕಿ ತಿಂದು// (ಹಿಂದಿ ಪದ್ಯದ ಕನ್ನಡಾನುವಾದ)

ಉಮಾಶಂಕರನಿಗೆ ಶುಭ ಹಾರೈಕೆ

ಪೃಚ್ಛಕತ್ವದ ನಾಂದಿಯಿದು ನಿಮಗೆ ಶಂಕರರೆ ಪರಶಿವನ ಬೆಂಬಲವದೊಲಿದು ಬರಲಿ/ ಅವಧಾನ ವೇದಿಕೆಗೆ ಮತ್ತೊಮ್ಮೆ ಮಗುದೊಮ್ಮೆ ತಮಗೆ ಬರಲವಕಾಶ ಸಿಗುತಲಿರಲಿ// ಅಂಕೆಕಟ್ಟನು ಮುರಿಯಲಾಶು ಕವಿತೆಯ ಹೇಳಿ ಬಳಿಕ ತಡೆ, ತೊಡಕುಗಳು, ಚಿತ್ರಬಂಧ/ ಮುಷ್ಟಿಯನು ಬಿಗಿಗೊಳಿಸಿ ಸಾಲಿಗಿಡುತಕ್ಷರವ ಪ್ರತಿಮಾಲೆ ನಿಮ್ಮದಿರಲೆಷ್ಟು ಚಂದ// ಅಕ್ಷರವನಡಗಿಸಿಡಿ, ಪದಗಳನು ಕೊಟ್ಟುಬಿಡಿ ಜೊತೆಗಷ್ಟು ತುಂಟತನವನಲ್ಲಿ ಬೆರೆಸಿ/ ಹತ್ತಾರು ವಿಧಗಳಲಿ ಪೃಚ್ಛಕತ್ವವ ಮೆರೆಸಿ ತದನಂತರವಧಾನಿಯಾಗಿ ಜಯಿಸಿ// ೦೮/೦೨/೨೦೨೪

ಕುಸುಮ ಷಟ್ಪದಿಯಲ್ಲಿ ಪ್ರೇಮಪದ್ಯ

ಎನ್ನ ಮನಸಿಗೆ ನೀನು ಕನ್ನ ಹಾಕಿದೆಯಲ್ಲೆ ಕನ್ನೆ ನೀನೆಲ್ಲಿರುವೆ ಬಾರೆ ಪ್ರಿಯೇ| ಕನ್ನಡದಿ ಪದ್ಯವನು ನಿನ್ನ ನೆನಪಲಿ ಬರೆದೆ ನಿನ್ನು ಕಾಯಿಸಬೇಡ ನೋಡೀಗಲೇ||೧|| ಬೇಡವೆಂದರು ನಾನು ಮೋಡಿ ಮಾಡಿದೆ ನೀನು ಜೋಡಿಯಾಗುವ ಬಯಕೆ ತಂದೆಯಲ್ಲೆ| ಓಡಿ ಹೋಗುವೆಯೀಗ ಕಾದು ಕುಳಿತಿರೆ ನಾನು ಕಾಡಹತ್ತಿಹೆ ಬಿಡದೆ ನಿದ್ರೆಯಲ್ಲು||೨|| ನೆನಪು ಕಾಡುತಲಿಹುದು ದಿನಗಳುರುಳುತಲಿಹುದು ಮನವು ಮರ್ಕಟನಂತೆ ಕುಣಿಯುತಿಹುದು| ಕನಸು ಕಾಂಬುದು ಸಾಕು ನನಸುಗೊಳಿಸುವ ಬಾರೆ ನಿನಗೆ ನನ್ನಯ ಕಷ್ಟ ತಿಳಿಯದೇನು||೩|| ಹೆದರದಿರು ನೀನೀಗ ಹದಿಹರೆಯ ಕಳೆದಿಹುದು ಹೃದಯ ಕರೆದಿದೆಯಿನ್ನು ತಡೆಯಲೇಕೆ?| ವಿಧಿ ಬರೆದ ಜೋಡಿಯಿದು ಮದುವೆಯಾಗಲೆಬೇಕು ಮುದಿಯ ವಯಸಿನ ತನಕ ಕಾಯಬೇಕೆ?||೪||

ಚಿಟ್ಟೆ

ಕಟ್ಟಿಗೆಯ ಮೇಲೊಂದು ಚಿಟ್ಟೆಯದು ಕುಳಿತಿಹುದು ಪುಟ್ಟ ದೇಹವು ಬಾಲ ನೀಳವಿಹುದು ಮಾಟವದು ಮೋಹಕವು ಮೀಟುವುದು ಭಾವವನು ನೋಟಗಾರಗೆ ನಿಜಕು ಹಬ್ಬವಹುದು

ಸೀಗೇಹುಡಿ

ಬಚ್ಚಲನ್ನು ಹೊಕ್ಕಿದೊಡನೆ ಕಟ್ಟೆಯೆಡೆಗೆ ನೋಡಿರಿ ಮುಚ್ಚಿಕೊಂಡ ಡಬ್ಬಿಯೊಳಗೆ ಇರುವ ಹುಡಿಯ ಕಾಣಿರಿ. ಸೀಗೆ ಕಾಯನಾಯ್ದು ತಂದು ಕುಟ್ಟಿ ತೆಗೆದ ಪುಡಿಯದು ಕಾಗೆ ಬಣ್ಣವಿದ್ದರೇನು? ಕೊಳೆಯ ಕಿತ್ತು ತೆಗೆವುದು. ಊರಳೆಲ್ಲ ಸ್ನಾನಕಿದುವೆ ಸೋಪು ಕೇಳಬೇಡಿರಿ ಬಾರಿ ಹಳೆಯ ರೀತಿಯೆಂದು ಮೂಗು ಮುರಿಯಬೇಡಿರಿ ಪುಡಿಯನೊಮ್ಮೆ ಮೈಗೆ ಹಚ್ಚಿ ಮತ್ತೆ ತಿಕ್ಕಿ ಗಸಗಸ ಕಡೆಗೆ ಬಿಸಿಯ ನೀರ ಹೊಯ್ಯೆ ಮನಸಿಗೆಲ್ಲ ಸಂತಸ. ತುರಿಕೆ, ಕಜ್ಜಿ, ಹುಣ್ಣು, ಕುರುವು ಚರ್ಮರೋಗ ಬಹುವಿಧ ಅರಿಯಿರಯ್ಯ ಎಲ್ಲದಕ್ಕೆ ಸೀಗೆ ಹುಡಿಯೆ ಔಷಧ. ನೂರರಷ್ಟು ಪ್ರಾಕೃತಿಕವು ಬಹಳ ಶುದ್ಧ ಸ್ವಚ್ಛವು  ಬೇರೆ ಏನು ಬೆರಕೆ ಇಲ್ಲ,  ಕೇಳಿರಿದುವೆ ಸತ್ಯವು. ಬಳಸಬೇಡಿ ವಿಷದ ಸೋಪು, ದೇಹಕಿದುವೆ ಉತ್ತಮ ತೊಳೆಯೆ ಮುಖವ ಹೊಳೆವುದಾಗ ನಾಚುವಂತೆ ಪೂರ್ಣಿಮಾ. 

ನಮ್ಮೂರು

ಇಮೇಜ್
ಕಂಪು ಸೂಸುವ ವಿವಿಧ ಪುಷ್ಪಗ ಳಿಂಪು ದನಿಯಲಿ ಕರೆವ ಕೋಗಿಲೆ ತಂಪು ನೆರಳನು ಕೊಡುವ ಮಾಮರವಿಲ್ಲಿ ನಿನಗಿಹುದು| ಸೊಂಪು ಹುಲ್ಲಿನ ಮೇಲೆ ವಿರಮಿಸಿ ಕೆಂಪು ಮೋಡವ ನೀನು ನೋಡುತ ಮಂಪರಿಸು ಮಲೆನಾಡಿನಡವಿಯ ಮುದವ ಹೀರುತಲಿ|| ೦೧/೦೯/೨೦೧೮

ಪಂಚತಂತ್ರ

ಕಥೆಯಂ ಪೇಳುವ ಸೋಗಿನೊಳ್ ಕವಿಯು ತಾಂ ತೋರಿರ್ಪನೈ ನೀತಿಯಂ| ಹಿತಮಾಗಿರ್ಪ ಪದಂಗಳಂ ಬಳಸಿ ತಾಂ ನೀಡಿರ್ಪನೈ ಮೋದಮಂ| ಮತಿಯಂ ಧರ್ಮದ ಮಾರ್ಗದೊಳ್ ಸೆಳೆವುದೈ ಈ  ಪಂಚತಂತ್ರಂ ಗಡಾ| ಸ್ತುತಿಯಂ ಗೈಯಲು ಸಾಧ್ಯಮೇ ಪದಗಳೊಳ್ ಶ್ರೀ ದುರ್ಗಸಿಂಹಂಗೆ ನಾಂ||

ಮರಳಿ ಮಣ್ಣಿಗೆ

ಇಮೇಜ್
ರೈಲು ಬಂಡಿಯು ಚುಕುಬುಕೆನ್ನುತ ಲೂರ ದಾರಿಯ ಹಿಡಿಯಿತು\ ಐಲು ಮನಸಿದು ತನ್ನ ನೆನಪಿನ ಬುತ್ತಿ ಬಿಚ್ಚಿಡತೊಡಗಿತು\\ ಮರದ ಮರೆಯಲಿ ತೊರೆಯ ಬದಿಯಲಿ ನೋಡಿರಲ್ಲಿದೆ ನಮ್ಮನೆ\ ಹಾರಿ ಹೋಗಿದೆ ಮನವದಲ್ಲಿಗೆ ದೇಹವಿಲ್ಲಿದೆ ಸುಮ್ಮನೆ\\ ಹುಟ್ಟಿ ಬೆಳೆದಿಹ ಕಥೆಯ ಹೇಳುವ ಗೋಪಿ ಹಕ್ಕಿಯ ಹಾಡಿದೆ\ ತೊಟ್ಟಿಲಾಡಿದ ಮೊದಲು ತೊದಲಿದ ನೆನಪದೆಲ್ಲವು ಅಲ್ಲಿದೆ\\ ಕಳೆದು ಹೋದವು ಬಹಳ ದಿನಗಳು ಮನೆಯ ದಾರಿಯ ಕಾಣದೆ\ ಹಳೆಯ ನೆನಪದು ಮನವ ಕಲಕಲು ಕರಗಿ ಕಂಬನಿಯಿಳಿದಿದೆ\\ ಹಲವು ನಾಡನು ಸುತ್ತಿ ಸಾಗಿದೆ ಸುಖವದೆಲ್ಲಿದೆ ತಿಳಿಯದೆ\  ಒಲುಮೆ ತುಂಬಿದ ತವರು ಮಣ್ಣಿಗೆ ಮರಳಲಲ್ಲಿಯೆ ಸೊಗವಿದೆ\\ ಬೆಳಕು ಮೂಡಿದೆ ರಾತ್ರಿ ಮುಗಿದಿದೆ ಕವಿದ ಕತ್ತಲೆ ಕಳೆದಿದೆ\ ಇಳೆಗೆ ಬಿದ್ದಿಹ ತಿಳಿಯ ಬೆಳಕಲಿ ಮನೆಯ ಹಾದಿಯು ಕಂಡಿದೆ\\ ೨೬/೦೭/೨೦೧೯

ಉಡುಪಿಯ ಕೃಷ್ಣ

ಇಮೇಜ್
ಉಡುಪಿ ಕೃಷ್ಣನೆ ನಿನ್ನ ನೋಡಲು ಕಡ ಲ ನಾಡಿಗೆ ಸಾಗಿ ಬಂದಿಹೆ ತಡವ ಮಾಡದೆ ತೋರು ನಿನ್ನಯ ಮೊಗದ ಚಂದವನು | ಗಡಿಗೆ ಬೆಣ್ಣೆಯು ಗಟ್ಟಿ ತುಪ್ಪವು ಕಡಲೆ ಹಿಟ್ಟಿನ ಲಾಡು ನಿನಗಿದೆ ಬಡವ ನಾನೈ ಕೊಡುವ ಭಕ್ಷ್ಯದಿ ತೃಪ್ತ ನೀನಾಗು || ೦೩/೦೯/೨೦೧೮

ಗುರು

ಇಮೇಜ್
ಬುದ್ಧಿ ತಿಳಿಯದ ಮೂಢ ನಾನಿರೆ ಬಿದ್ದುಕೊಂಡಿರಲರಿವು ಮೂಡದೆ ಪೆದ್ದನಿವನೆಂದೆನ್ನ ಜರಿಯುತ ಜಗವು ನಗುತಿರಲು | ಬುದ್ಧನಂದದಿ ನೀನು ಬಂದಂ ದೆದ್ದು ನಿಲ್ಲಿಸಿ ಬುದ್ಧಿ ಪೇಳುತ ಲುದ್ಧರಿಸಿ ನೀ ಹರಸಿ ಕಳುಹಿದೆ ಗುರುವೆ ಕರುಣಾಳು || ೦೫/೦೯/೨೦೧೮

ಆಟ

ಇಮೇಜ್
ಭಾನುವಾರ ಬಂತು ನೋಡು ನಾನು ನೀನು ಸೇರಿಕೊಂಡು ಚಿನ್ನಿದಾಂಡು ಕುಂಟೆಬಿಲ್ಲೆಯಾಟವಾಡುವ/ ಚನ್ನೆಯಾಟ ಪಗಡೆಯಾಟ ಕಣ್ಣಮುಚ್ಚೆ ಕಾಡೆಗೂಡೆ ಬಣ್ಣಬಣ್ಣದಾಟವಾಡಿ ನಕ್ಕುನಲಿಯುವ//

ನೀರುಗಾರಿನ ಬಿಂದುಮಾಧವ

ದಟ್ಟ ಕಾನನ ಪುಷ್ಪ ಫಲಗಳು  ಕಟ್ಟೆ ಕೆರೆಗಳು ಹರಿವ ತೊರೆಗಳು ಬೆಟ್ಟದಿಂದಲಿ ಸುತ್ತುವರಿದಿಹ ರಮ್ಯ ಪರಿಸರವು| ತೊಟ್ಟು ಬನಗಳ ಹಸಿರ ವಸ್ತ್ರವ ಪುಟ್ಟ ಹಳ್ಳಿಯು ಸೊಗಸು ಸೂಸಿರೆ ಸುಟ್ಟ ಕಾಮನು ಜನಿಸಿ ತಂಗಿದನಿಲ್ಲಿಯೆನಿಸುವುದು|| ಇಂದು ಶೇಖರ ತನ್ನ ದೇಶದಿ ಬಂಧುಬಾಂಧವರನ್ನು ಸೇರಿಸಿ ಯೊಂದು ಶುಭದಿನ ಭುವಿಯ ಸುತ್ತುತಲಲ್ಲಿ ಬಂದಿರಲು| ಚೆಂದದಿಂದಲಿ ಬೆಳೆದ ಹುಲ್ಲನು ನಂದಿರಾಯನು ಬಯಸಿ ಪೇಳಲು ಬಿಂದುಮಾಧವನೆನಿಸಿಯಲ್ಲಿಯೆ ಶಿವನು ನೆಲೆಸಿದನು ||

ಭೀಮೇಶ್ವರ ಮಾಹಾತ್ಮೆ

ವನವಾಸದಿ ಪಾಂಡವರೆಲ್ಲರಿರಲ್ ಶಿವರಾತ್ರಿಯ ರಾತ್ರಿಯು ಬಂದಿರೆ ತಾಂ ಶಿವಪೂಜೆಯು ತಪ್ಪುವುದೆಂದೆನುತಂ ಬಹು ಚಿಂತಿತಳಾಗಿಯೆ ಕುಂತಿಯಿರಲ್ ಸುತರೈವರು ನಾವಿರೆ ಚಿಂತೆಯದೇ- ಕೆನುತಂ ಬಲಭೀಮನು ಕಾಶಿಗೆ ಪೋ- ಗಿಯೆ ಲಿಂಗವ ತಂದನು; ಪಾರ್ಥನು ಪ- ರ್ವತಕಂ ಪೊಡೆದಂ ಶರರಾಶಿಗಳನ್ ಜಲವೆದ್ದುದದೊಮ್ಮೆಗೆ ಬಿದ್ದುದು ತಾಂ ಹೊಳೆಯಾಗಿಯೆ ಸಾಗಿತದಾ ಜಲವಂ ಶಿವಲಿಂಗಕೆ ಹೊಯ್ದರು ಭಕ್ತಿಯೊಳೀ- ಶನ ಪೂಜಿಸಿ ಸಂತಸ ಹೊಂದಿದರೈ ಮಲೆನಾಡಿನ ಸುಂದರ ಕಾನನದೊಳ್ ಹೊಳೆಯಿಂತದು ತಾಂ ಶರದಿಂ ಜನಿಸಲ್ ತಲೆಕಾಯುತ ಭಕ್ತ ಜನಂಗಳ ತಾಂ ನೆಲೆಯಾಗಿಹನೀ ವರ ಭೀಮಶಿವಂ  

ಮಾತಾಮಹಿ

ಇಮೇಜ್
ಅಳಿದು ಮನದೊಳಗುಳಿದು ನೆನಪಿನಾಳದೊಳಿಳಿದು ಹೃದಯ ಗಿರಿಯನು ದಿನವು ಸುಡುವುದೇಕೆ?/ ಭಾ ವ ಶಿಖರವು ಕರಗಿ ಕಣ್ಣೀರು ಕೋಡೈಸೆ ತ ರ್ಪಣವನರ್ಪಿಸಿದೆನೆನ್ನಬೇಕೆ! // ಬದುಕು ಮುಳ್ಳಿನ ಹಾದಿ ಬಡತನವೆ ಒಡನಾಡಿ ಪಟ್ಟಕಷ್ಟವ ದೇವನೊಬ್ಬ ಬಲ್ಲ/ ಭೀಮಲಿಂಗನ ನಂಬಿ ಬಾಳ್ಕೆಯನು ಕಟ್ಟಿದಿರಿ ಬವಣೆಗಳು ನೂರಿರಲಿ ಚಿಂತೆಯಿಲ್ಲ// ಬೇವುಬೆಲ್ಲದ ತೆರದಿ ನೋವು ನಲಿವನು ಬೆರೆಸಿ ನೆಮ್ಮದಿಯ ಭೋಜನವ ಸಿದ್ಧವಿಟ್ಟು/ ಅಕ್ಕರೆಯ ತಟ್ಟೆಯಲಿ ಬಡಿಸೆ ನಮಗದನಿಟ್ಟು, ನಿಮಗಲ್ಲಿ ಮಿಕ್ಕುವುದದೆಷ್ಟು ಹಿಟ್ಟು?// 'ವ್ಯಥೆಯೆಲ್ಲವೆನಗಿರಲಿ ಲೋಕಕ್ಕೆ ಸುಖವಿರಲಿ' ಇದುವೆ ನಿಮ್ಮಯ ಬಾಳ ಧ್ಯೇಯಮಂತ್ರ/ ಮನೆಯವರೊ ಬಂಧುಗಳೊ ಪಶುಪಕ್ಷಿ ಜೀವಿಗಳೊ ಯಾರನ್ನು ನೋಯಿಸದುದಾರ ಸೂತ್ರ// ಪತಿಯ ಹಿತವನು ಕೇಳಿ ನಮಗೆ ನೀತಿಯ ಪೇಳಿ ತಪ್ಪದೆಯೆ ಹದಿಬದೆಯ ಕೆಲಸವನ್ನು/ ಅಮಿತ ಸಹನೆಯ ತಾಳಿ ಧರ್ಮಮಾರ್ಗದಿ ಬಾಳಿ ಸಾರ್ಥಕವಗೊಳಿಸಿದಿರಿ ಜನುಮವನ್ನು// ಇಹದ ಜೀವನ ಬೆಳಗಿ ಚಿರ ಬೆಳಕ ಸೇರಿದಿರಿ ಬಂಧಗಳ ಕಡಿಯಲೀ ತವಕವೇಕೆ?/ ಭೌತ ದೇಹವ ಕಳೆದು ಭಾವವೊಂದೇ ಉಳಿದು ಹೃದಯ ಗಿರಿಯನು ದಿನವು ಸುಡುವುದೇಕೆ?//     ೩೧/೦೮/೨೦೨೩

ಚಂದ್ರಿಕೆಯ ಹುಟ್ಟುಹಬ್ಬ

  ಇಂದು ನಿನ್ನ ಹುಟ್ಟುಹಬ್ಬವಂತೆ ನನ್ನ ಚಂದ್ರಿಕೆ/   ಸುಂದರಾಂಗಿ ತಂದೆ ನೋಡು ಪ್ರೇಮದೊಂದು ಕಾಣಿಕೆ// ಒಲುಮೆ ಎಲೆಯ ಮೇಲೆ ನಿನಗೆ ಪ್ರೀತಿಯನ್ನ ಬಡಿಸಿಹೆ/ ಕಲಸಿಕೊಳ್ಳಲದರ ಜೊತೆಗೆ ಹಾಸ್ಯದಡುಗೆ ಇರಿಸಿಹೆ// ಎನ್ನ ಮಡಿಲಿನೊಳಗೆ ಮಲಗು, ಕಷ್ಟಗಳನು ಮರೆಯುತ/ ಸುಧೆಯ ತೆರದಿ ಮಧುರವಾದ ನೆನಪುಗಳನು ಮೆಲಕುತ// ಸರಿದು ಹೋಗುತಿಹುದು ಕಾಲವಾಟವಾಡುವಂದದಿ/ ಹರಿಯು ಸರಿಯಿದೆನ್ನುವಂತೆ ಬಾಳ್ವ ನಾವು ಚಂದದಿ// ಹರಡಿಕೊಳಲಿ ಬಾಳಿನಗಲ ನಮ್ಮ ಸ್ನೇಹ ಸಂತಸ/ ವಿರಸಕಲ್ಲಿ ಜಾಗವಿರದೆ ತುಂಬಿ ಬರಲಿ ಸಮರಸ// ಹೊಸತು ವರುಷ ಬರುತಲಿಹುದು ಹರುಷವನ್ನು ತರಲದು/ ಖುಷಿಯು ಬಾಳಿಗೆಲ್ಲವಿರಲಿ ಎಂಬ ಹರಕೆಯೆನ್ನದು// ೨೪/೦೧/೨೦೨೫